ರಕ್ಕಸ ತಂಗಡಿ	-		ವಿಜಯನಗರದ ಸಾಮ್ರಾಜ್ಯದ ಮೇಲೆ 1565 ರಲ್ಲಿ ಬಹಮನಿ ಸುಲ್ತಾನರು ಒಟ್ಟುಗೂಡಿ ಯುದ್ಧಮಾಡಿದ ಒಂದು ರಣಬಯಲು. ತಾಳೀಕೋಟೆ ಯುದ್ಧವೆಂದೂ ಪ್ರಸಿದ್ಧ. ಈ ಯುದ್ಧದಲ್ಲಿ ವಿಜಯನಗರ ಸಾಮ್ರಾಜ್ಯ ಸೋತು ಕೊನೆಗೊಂಡಿತು. ಬಿಜಾಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನಲ್ಲಿ ಕಸಬೆಯಿಂದ ಈಶಾನ್ಯಕ್ಕೆ 35 ಕಿಮೀ ದೂರದಲ್ಲಿರುವ ತಾಳೀಕೋಟೆಯಲ್ಲಿದ್ದ ಕೋಟೆಯಲ್ಲಿ ಮುಸಲ್ಮಾನ ಸುಲ್ತಾನರು ತಮ್ಮ ಸೇನೆಯನ್ನು ಸಂಗ್ರಹಿಸಿ ಅನಂತರ ಇದರ ಹತ್ತಿರವಿರುವ ಪ್ರದೇಶದಲ್ಲಿ ಯುದ್ಧಮಾಡಿದ್ದರಿಂದ ತಾಳಿಕೋಟೆ ಯುದ್ಧವೆಂದೂ ಕರೆಯುವುದು ವಾಡಿಕೆಯಾಯಿತು. ಅದರೆ ವಾಸ್ತವವಾಗಿ ಬಿಜಾಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ಕೃಷ್ಣಾನದಿಯ ಉತ್ತರಕ್ಕೆ ಇರುವ ಇಂದಿನ ರಕ್ಕಸಗಿ - ತಂಗಡಗಿ - ತಂಗಡಬೈಲು ಅಮ್ಮಾಪುರ - ಹೀಗೆ ಮೂರು ಚಿಕ್ಕ ಹಳ್ಳಿಗಳನ್ನು ಅವರಿಸಿಕೊಂಡಿರುವ ದೊಡ್ಡ ಬಯಲಿನಲ್ಲಿ ಯುದ್ಧ ನಡೆದಿದೆ. ಇದರ ಬಗ್ಗೆ ಕೆಳದಿ ನೃಪವಿಜಯ ಗ್ರಂಥದಲ್ಲಿ `ಶಾಲಿವಾಹನ ಶಕವರ್ಷ 1487 ನೆಯ ರಕ್ತಾಕ್ಷಿ ಸಂವತ್ಸರದ ಮಾಘಬಹುಳದಲ್ಲಿ ತಕ್ಕಸತಂಗಡಿಯೆಂಬ ಸ್ಥಳದಲ್ಲಿ ರಾಮರಾಯರಂ ಪಿಡಿದು ಶಿರಶ್ಛೇದನಂಗೈದು` ಎಂಬ ಉಲ್ಲೇಖವಿದೆ. ಇದರಂತೆ ದಾಖಲೆಗಳು ದೊರೆತ ಮೇಲೆ ತಾಳೀಕೋಟೆ ಯುದ್ಧವನ್ನು `ರಕ್ಕಸತಂಗಡಿ ಯುದ್ಧ` ಎಂದು ಇತಿಹಾಸ ತಜ್ಞರು ಪರಿಷ್ಕರಿಸಿದರು. ಇಂದಿನ ರಕ್ಕಸಗಿಯೆ ಅಂದಿನ ರಕ್ಕಸತಂಗಡಿ. ಕೃಷ್ಣಾ ನದಿಯ ಎಡಬಲದ ಹಲವಾರು ಸ್ಥಳಗಳಲ್ಲಿ ಯುದ್ಧ ನಡೆದಿದ್ದು ಅಂಥ ಸ್ಥಳಗಳಲ್ಲಿ ರಕ್ಕಸತಂಗಡಿಯೂ ಒಂದು.
				                   					   (ಎಸ್.ಎಸ್.ಜೆ.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ